ರುದ್ರಾಕ್ಷಿಮರ
	ಸಸ್ಯಸಾಮ್ರಾಜ್ಯದ ಇಲಾಯಿಯೊಕಾರ್ವೇಸಿ ಎಂಬ ಕುಟುಂಬಕ್ಕೆ ಸೇರಿರುವ ಮಧ್ಯಮ ಗಾತ್ರದ ಮರ. ಇದರ ವೈಜ್ಞಾನಿಕ ನಾಮ ಇಲಾಯಿಯೊಕಾರ್ಪಸ್ ಜ್ಯಾನಿಟ್ರಸ್. ಸು. 6-10 ಮೀ ಎತ್ತರಕ್ಕೆ ಬೆಳೆಯುವ ಈ ಮರಗಳು ನೇಪಾಲ, ಬಿಹಾರ, ಬಂಗಾಲ, ಅಸ್ಸಾಮ್, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳ ದಟ್ಟಕಾಡುಗಳಲ್ಲಿ ಕಂಡುಬರುತ್ತವೆ. ಅಪರೂಪಕ್ಕೆ ಈ ಸಸ್ಯವನ್ನು ಅಲಂಕಾರಕ್ಕಾಗಿಯೂ ಬೆಳೆಸುವುದುಂಟು.

	ಎಲೆ ಉದುರಿ ಬಿದ್ದಿರುವ ಹಳೆಯದಾದ ಸ್ಥಳಗಳಲ್ಲಿ ರುದ್ರಾಕ್ಷಿ ಗಿಡದ ಹೂಗಳು ಅರಳುತ್ತವೆ. ಗೊಂಚಲು ಗೊಂಚಲಾಗಿ ಹೂಗಳು ಆರಳುತ್ತವೆ. ಇವು ಸಮೂಹ ಅಥವಾ ರೆಸೀಮ್ ಮಾದರಿಯವು. ಒಂದೇ ಬೀಜವಿರುವ ಇದರ ಕಾಯಿಗೆ ಡ್ರೂಪ್ ಎಂದು ಹೆಸರು. ಗುಂಡಗಿರುವುದು. ನೇರಳೆ ಅಥವಾ ನೀಲಿ ಬಣ್ಣ. ಕಾಯಿಯ ವ್ಯಾಸ 1.5 ಸೆಂಮೀ. ತಿರುಳಿನ ರುಚಿ ಹುಳಿ. ಇದಕ್ಕೆ ಔಷಧೀಯ ಗುಣವಿದೆ. ಮೂರ್ಛೆರೋಗದ ಚಿಕಿತ್ಸೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.

	ಬೀಜದ ಹೊರಮೈ ಗುಂಡಾಗಿದ್ದು ಹೊರಕವಚ ಕಲ್ಲಿಗಿಂತಲೂ ಬಿರುಸಾಗಿರುವುದರಿಂದ ಈ ಕಾಯಿಗಳು ಹಲವಾರು ವರ್ಷ ಪರ್ಯಂತ ಕೆಡುವುದಿಲ್ಲ. ಬೀಜಗಳ ಹೊರಮೈಯಲ್ಲಿ ಮೇಲಿನಿಂದ ಕೆಳಕ್ಕೆ ರೂಪಗೊಂಡಿರುವ ಉದ್ದ ಸೀಳುಗಳಿವೆ. ಐದು ಸೀಳುಗಳಿರುವ ಬೀಜವನ್ನು ಪಂಚಮುಖಿ ಎನ್ನುತ್ತಾರೆ. ವಿರಳವಾಗಿ ಬೆಳೆಯುವ ಮರವಾದ್ದರಿಂದ ರುದ್ರಾಕ್ಷಿಬೀಜಗಳಿಗೆ ಬೇಡಿಕೆ ಅಧಿಕ. ಔಷಧೀಯ ಗುಣವೂ ಇವುಗಳ ಬೇಡಿಕೆಗೆ ಇನ್ನೊಂದು ಕಾರಣ. ಬೀಜದ ಹೊರಮೈ ಕೆಲವೊಮ್ಮೆ ಮಾರ್ಪಾಡಾಗಿ ಮೂಲಗುಣದಿಂದ ಭಿನ್ನವಾಗಿರುತ್ತದೆ. ಇಂಥ ಬೀಜಗಳಿಗೆ ಬೇಡಿಕೆ ಇನ್ನೂ ಹೆಚ್ಚು.

	ಹಿಂದೂಗಳಲ್ಲಿ ರುದ್ರಾಕ್ಷಿ ಬೀಜಕ್ಕೆ ಪವಿತ್ರ ಸ್ಥಾನವಿದೆ. ಬೀಜಗಳನ್ನು ನಯವಾಗಿ ಹೊಳಪುಗೊಳಿಸಿ, ಬಣ್ಣ ಕೊಡಿಸಿ, ಜಪಮಾಲೆಗಳಾಗಿಯೂ ಒಡವೆಗಳಾಗಿಯೂ ಧರಿಸುವ ವಾಡಿಕೆ ಇದೆ. ಕೆಲವರು ಬೀಜಗಳಿಗೆ ಬೆಳ್ಳಿ ಅಥವಾ ಬಂಗಾರದ ತಗಡನ್ನು ವಿಧವಿಧವಾಗಿ ಹೊಡೆಸಿಕೊಂಡು ಧರಿಸುವುದೂ ಉಂಟು.                 
	(ಜಿ.ಆರ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ